1836-1925. ಇಂಗ್ಲಿಷ್ ವೈದ್ಯ. ಮಹಾಗ್ರಂಥವಾಗಿದ್ದ ವೈದ್ಯಸೂತ್ರ ವಿಧಾನಗಳನ್ನು 8 ಸಂಪುಟಗಳಲ್ಲಿ ಸಂಪಾದಿಸಿ (1896-1899) ಕೀರ್ತಿ ಪಡೆದ. ಈ ಮಹಾಗ್ರಂಥ ಹಲವಾರು ಬಾರಿ ಮರುಮುದ್ರಣ ಕಂಡಿತು. ವೈದ್ಯಶಾಸ್ತ್ರಕ್ಕೆ ಇವನ ಹಲವಾರು ಕೊಡುಗೆಗಳಿವೆ. ಹಿಂದೆ ಎರಡು ಅಡಿಗಳಷ್ಟು ನೀಳವಾಗಿದ್ದ ಮೈ ಉಷ್ಣಮಾಪಕವನ್ನು ಈಗಿರುವ ಸಣ್ಣ ಆಕಾರದಲ್ಲಿ ತಂದವನೀತ (1866). ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತನಾದ (1880). ಹಾಗೇ ವೈದ್ಯ ರಾಯಲ್ ಕಾಲೇಜಿನಲ್ಲೂ ಫೆಲೋಷಿಪ್ ಪಡೆದ (1883). ಪ್ರಪಂಚದಲ್ಲಿ ಮೊಟ್ಟಮೊದಲಾಗಿ, ಉಪದಂಶ (ಸಿಫಿಲಿಸ್) ರೋಗದಲ್ಲಿ ಮಿದುಳಿನ ಧಮನಿಗಳ ವ್ಯತ್ಯಾಸಗಳು (1868), ಧಮನಿಗಳ ರೋಗಗಳು-ಇವನ್ನು ಕುರಿತ ಎರಡು ಸಂಪುಟಗಳನ್ನು ಪ್ರಕಟಿಸಿದ (1915). ಗುಂಡಿಗೆಯಿಂದೇಳುವ ಎದೆಶೂಲೆಗೆ ಅದರ ಧಮನಿಗಳು ಅಮುಕಿ ಕುಗ್ಗುವುದೇ ಕಾರಣವೆಂದು ಮೊದಲು ಹೇಳಿದ (1915). ಆಳವಾದ ಅಭ್ಯಾಸ, ಅನುಭವಗಳಿಂದ, ಒಳಾಂಗಗಳ ನರಬೇನೆಗಳು (1884), ಸಾಮಾನ್ಯ ಮನೋರೋಗಗಳು (1891) ಎಂಬ ವಿಷಯಗಳ ಮೇಲೆ ಈತ ಮಾಡಿದ ಭಾಷಣಗಳು ಅಚ್ಚಾಗಿವೆ. ಕೊರಳಲ್ಲೇಳುವ ಕ್ಷಯದ ಗೆಡ್ಡೆಗಳನ್ನು ಕೊಯ್ತೆಗೆವ ವಿಧಾನವನ್ನು ಮೊದಲು (1885) ವಿವರಿಸಿದ. ನರಗಳ, ಮೂತ್ರಪಿಂಡಗಳ ರೋಗಗಳಲ್ಲಿ ಕೆಟ್ಟಿರುವುದನ್ನು ಕಣ್ಣಿನಿಂದ ನೋಡುವ ಕಣ್ಣುದರ್ಶಕದ ಬಳಕೆ ಜಾರಿಗೆ ತಂದ (1871). ಕೊನೆಗೆ ಪ್ರೀವಿ ಕೌನ್ಸಿಲರಾಗಿ ಕೆಲಸಮಾಡಿದ (1920). ವೈದ್ಯಚರಿತ್ರೆಯನ್ನು ಆಳವಾಗಿ ಅಭ್ಯಾಸಮಾಡಿದ್ದ ಆಲ್ಬರ್ಟ್ ಸರ್ ಥಾಮಸ್ ಕ್ಲಿಫರ್ಡ್ ಅದರಲ್ಲಿ ಪರಿಣತ ಎನ್ನಿಸಿಕೊಂಡಿದ್ದ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ